ಜೇಮ್ಸ್ (ಸ್ಕಾಟ್ಲೆಂಡಿನ ದೊರೆಗಳು)	

ಜೇಮ್ಸ್ I : 1394-143. 1427 ರಿಂದ 1437ರವರೆಗೆ ಸ್ಕಾಟ್ಲೆಂಡಿನ ದೊರೆಯಾಗಿದ್ದ. 3ನೆಯ ರಾಬರ್ಟನ ಮಗ. ಜೇಮ್ಸ್‍ನ ಜೀವಕ್ಕೆ ಅಪಾಯವಿರುವುದೆಂದು ಬೆದರಿ ಇವನ ತಂದೆ ಇವನನ್ನು 1406ರಲ್ಲಿ ಫ್ರಾನ್ಸಿಗೆ ಕಳಿಸಿದ. ಇಂಗ್ಲಿಷರು ಇವನನ್ನು ಬಂಧಿಸಿ 1424ರವರೆಗೂ ಸೆರೆಯಲ್ಲಿಟ್ಟಿದ್ದರು. ಬಂಧನದ ಕಾಲದಲ್ಲಿ ಇಂಗ್ಲಿಷರು ಇವನಿಗೆ ರಾಜಾತಿಥ್ಯ ನೀಡಿ ಒಳ್ಳೆಯ ವಿದ್ಯೆ ಕೊಡಿಸಿದರು. ಸ್ಕಾಟ್ಲೆಂಡಿನ ದೊರೆ ತೀರಿಕೊಂಡಾಗ ಇವನು ಬಿಡುಗಡೆ ಹೊಂದಿದ. ಸ್ಕಾಟ್ಲೆಂಡಿಗೆ ಹಿಂದಿರುಗುವ ಮೊದಲು ಇವನು ಜೋನ್ ಬ್ಯೂಫರ್ಟಳನ್ನು ಮದುವೆಯಾದ. ಶ್ರೀಮಂತರು ಪ್ರಬಲರಾಗಿ ಆಶಾಂತಿಗೆ ಒಳಗಾಗಿದ್ದ ಸ್ಕಾಟ್ಲೆಂಡಿನ ಮೇಲೆ ಇವನು ಉಕ್ಕಿನ ಹಿಡಿತ ಹೊಂದಿ ಆಡಳಿತ ನಡೆಸಿದ. ಶ್ರೀಮಂತರನ್ನು ನಿರ್ದಯೆಯಿಂದ ಹತ್ತಿಕ್ಕಿದ. ಇವನು ದಕ್ಷನಾದ ದೊರೆಯಾದರೂ ತನ್ನ ಸೇಡಿನ ಮನೋಭಾವದಿಂದ, ಕಾಮುಕ ಪ್ರವೃತ್ತಿಯಿಂದ, ಮುಂಗೋಪದಿಂದ ಜನಪ್ರಿಯತೆ ಕಳೆದುಕೊಂಡ, ಕೆಲವರು ಶ್ರೀಮಂತರು ಪಿತೂರಿ ನಡೆಸಿ ಇವನನ್ನು ಕೊಲೆ ಮಾಡಿದರು. ಅನೇಕ ಸುಂದರ ಕವಿತೆಗಳ ಕರ್ತೃ ಈತನೆಂದು ಪ್ರತೀತಿ.

	ಜೇಮ್ಸ್ II : 1430-1460. ಒಂದನೆಯ ಜೇಮ್ಸನ ಮಗ. 1437-1460ರಲ್ಲಿ ಸ್ಕಾಟ್ಲೆಂಡಿನ ದೊರೆಯಾಗಿದ್ದ. ದೊರೆತನಕ್ಕೆ ಉತ್ತರಾಧಿಕಾರಿಯಾದಾಗ ಇವನಿಗೆ ಏಳು ವರ್ಷ. ಇವನು ಪ್ರಾಪ್ತವಯಸ್ಕನಾಗುವವರೆಗೂ ಡೊಗ್ಲಾಸಿನ ಅರ್ಲರು ಅನುಕ್ರಮವಾಗಿ ರೀಜೆಂಟರಾಗಿ ಆಡಳಿತ ನಡೆಸಿದರು. ಇವನು 1449ರಿಂದ ಸ್ವತಂತ್ರವಾಗಿ ಆಳತೊಡಗಿದ. ಗುಲಾಬಿಗಳ ಯುದ್ಧದಲ್ಲಿ ಇಂಗ್ಲೆಂಡಿನ ಮೇಲೆ ಏರಿಹೋಗಿದ್ದ. ಅಕಸ್ಮಾತ್ ಸಾವಿಗೆ ಈಡಾದ.

	ಜೇಮ್ಸ್ III : 1451-1488. ಎರಡನೆಯ ಜೇಮ್ಸನ ಮಗ. 1460ರಿಂದ 1488ರವರೆಗೆ ದೊರೆಯಾಗಿದ್ದ. ಇವನ ತಾಯಿ ತೀರಿಕೊಂಡಾಗ ಬಾಯ್ಡ್ ಮನೆತನದವರು ಇವನನ್ನು ಬಂಧಿಸಿ 1469ರವರೆಗೆ ಆಡಳಿತ ನಡೆಸಿದರು. ಇವನು ಆಳ್ವಿಕೆ ನಡೆಸುತ್ತಿದ್ದ ಕಾಲ ತುಂಬ ಪ್ರಕ್ಷುಬ್ಧಮಯವಾಗಿತ್ತು. ಶ್ರೀಮಂತರು ಇವನನ್ನು 1488ರಲ್ಲಿ ಕೊಲೆ ಮಾಡಿದರು.

	ಜೇಮ್ಸ್ Iv : 1473-1513. ಮೂರನೆಯ ಜೇಮ್ಸನ ಮಗ. 1488ರಿಂದ 1513ರವರೆಗೆ ಸ್ಕಾಟ್ಲೆಂಡಿನ ದೊರೆ. ಜನಪ್ರಿಯನಾಗಿ ಆಳ್ವಿಕೆ ನಡೆಸಿದ. ಇವನಿಂದ ಸ್ಕಾಟ್ಲೆಂಡಿನ ಹಿತರಕ್ಷಣೆಯಾಯಿತು. ಇಂಗ್ಲೆಂಡಿನ 7ನೆಯ ಹೆನ್ರಿಯ ಮಗಳು ಮಾರ್ಗರೆಟ್ ಟ್ಯೂಡರನ್ನು ಈತ 1502ರಲ್ಲಿ ಮದುವೆಯಾದ. ಇದರಿಂದ ಇಂಗ್ಲೆಂಡ್ ಸ್ಕಾಟ್ಲೆಂಡ್‍ಗಳ ನಡುವೆ ಸೌಹಾರ್ದ ಬೆಳೆಯುವ ಸೂಚನೆಗಳು ಕಂಡುಬಂದುವು. ಆದರೆ 8ನೆಯ ಹೆನ್ರಿ ಇಂಗ್ಲೆಂಡಿಗೆ ದೊರೆಯಾದಾಗ ಮತ್ತೆ ವಿರಸ ಬೆಳೆಯಿತು. ಜೇಮ್ಸ್ ಇಂಗ್ಲೆಂಡಿನ ಮೇಲೆ ದಂಡೆತ್ತಿ ಹೋದ. 1513ರಲ್ಲಿ ಫ್ಲಾಡನ್ ಕದನದಲ್ಲಿ ಇವನು ಸಾವಿಗೆ ಈಡಾದ.

	ಜೇಮ್ಸ್ v : 1512-1542. ನಾಲ್ಕನೆಯ ಜೇಮ್ಸನ ಮಗ. 1513-1542ರಲ್ಲಿ ಸ್ಕಾಟರ ದೊರೆ. ತಂದೆ ತೀರಿಕೊಂಡಾಗ ಇವನು ಚಿಕ್ಕವನಾಗಿದ್ದ. ಇವನ ರೀಜೆಂಟರು ತಮ್ಮತಮ್ಮಲ್ಲೆ ಬಡಿದಾಡುತ್ತಿದ್ದರು. ಇವನು ಬಂಧಿತನಾಗಿ, 1528ರಲ್ಲಿ ತಪ್ಪಿಸಿಕೊಂಡು, 8ನೆಯ ಹೆನ್ರಿಯ ವಿರುದ್ಧವಾಗಿ ಫ್ರಾನ್ಸಿನ ಸ್ನೇಹ ಬೆಳೆಸಿದ. 1538ರಲ್ಲಿ ಇವನು ಗ್ರೀಸಿನ ಮೇರಿಯನ್ನು ಮದುವೆಯಾದ. 1542ರಲ್ಲಿ ಇಂಗ್ಲೆಂಡಿನೊಂದಿಗೆ ಯುದ್ಧ ಮಾಡಿದ. ಅನಂತರ ಸ್ವಲ್ಪಕಾಲದಲ್ಲೇ ಇವನು ತೀರಿಕೊಂಡ.

	ಜೇಮ್ಸ್ vI : (ನೋಡಿ- ಜೇಮ್ಸ್-(ಇಂಗ್ಲೆಂಡಿನ-ದೊರೆಗಳು))			    (ಎಂ.ಸಿ.ಎಚ್.; ಎಸ್.ಕೆ.ಕೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ